ಪ್ರೆಸ್‍ಕಾಟ್, ವಿಲಿಯಮ್ ಹಿಕ್ಲಿಂಗ್
1796-1859. ಮೆಕ್ಸಿಕೋ ಮತ್ತು ಪೆರುವಿನ ಮೇಲೆ ಸ್ಪೇನ್ ವಿಜಯವನ್ನು ಮನಮುಟ್ಟುವಂತೆ ನಿರೂಪಿಸಿ ಅಮೆರಿಕದ ಪ್ರಪಥಮ ವ್ಶೆಜ್ಞಾನಿಕ ಇತಿಹಾಸಕಾರನೆಂದು ಪ್ರಸಿದ್ಧನಾದವನು.
ಪ್ರೆಸ್‍ಕಾಟ್ ಮೆಸಾಚುಸೆಟ್ಸ್ ರಾಜ್ಯದ ಸೇಲಂ ಎಂಬಲ್ಲಿ 1796 ಮೇ 4ರಂದು ಜನಿಸಿದ. ಈತ 1811ರಲ್ಲಿ ಹಾರ್ವರ್ಡ್ ವಿದ್ಯಾಲಯವನ್ನು ಸೇರಿದ. ಅಲ್ಲಿರುವಾಗ ವಿದ್ಯಾರ್ಥಿಗಳ ಮಧ್ಯೆ ನಡೆದ ಹೊಡೆದಾಟದಲ್ಲಿ ಒಣಗಿದ ರೊಟ್ಟಿಯ ತುಂಡೊಂದು ತಾಗಿ ಈತನ ಎಡಗಣ್ಣು ಕುರುಡಾಯಿತು. ಸೋಂಕಿನಿಂದಾಗಿ ಬಲಗಣ್ಣೂ ದುರ್ಬಲವಾಯಿತು. ಇದರಿಂದ ಈತನ ಓದುಬರಹಕ್ಕೆ ತೊಡಕುಂಟಾದರೂ ನಾಕ್ಟೋಗ್ರಾಫ್ ಎಂಬ ಸಾಧನದಿಂದ ತನ್ನ ಬಹುತೇಕ ಬರವಣಿಗೆ ಮತ್ತು ಪತ್ರವ್ಯವಹಾರಗಳನ್ನು ಈತ ನಿರ್ವಹಿಸುತ್ತಿದ್ದ. 1814ರಲ್ಲಿ ಪದವೀಧರನಾದ. ಬಳಿಕ ಯೂರೋಪಿನ ಪ್ರವಾಸ ಕೈಗೊಂಡ. ಬಾಸ್ಟನ್ನಿಗೆ ಹಿಂದಿರುಗಿದನಂತರ ಇತಿಹಾಸದ ಅಧ್ಯಯನದಲ್ಲಿ ಮಗ್ನನಾದ. 1820ರಲ್ಲಿ ಸೂಸಾನ್ ಅಮ್ರಾಯ್ ಎಂಬುವಳನ್ನು ಮದುವೆಯಾದ.
1821ರಿಂದ ಈತನ ವಿಮರ್ಶೆ ಹಾಗೂ ಪ್ರಬಂಧಗಳು ನಾರ್ತ್ ಅಮೆರಿಕನ್ ರಿವ್ಯೂನಲ್ಲಿ ಪ್ರಕಟವಾಗತೊಡಗಿದವು. ಇವುಗಳಲ್ಲಿ ಕೆಲವು ಬಯೋಗ್ರಫಿಕಲ್ ಅಂಡ್ ಕ್ರಿಟಿಕಲ್ ಮಿಸೆಲ್ಲೆನೀಸ್‍ನಲ್ಲಿ (1845) ಮರು ಮುದ್ರಣಗೊಂಡವು. ಜೇರ್ಡ್ ಸ್ಟಾಕ್ರ್ಸ್‍ನ ಲೈಬ್ರರಿ ಆಫ್ ಅಮೆರಿಕನ್ ಬಯೋಗ್ರಫಿಯಲ್ಲಿ ಈತ ಬರೆದ ಲೈಫ್ ಆಫ್ ಚಾಲ್ರ್ಸ್ ಬ್ರಾಕಡನ್ ಬ್ರೌನ್ (1834) ಎಂಬ ಲೇಖನ ಈತನ ಉನ್ನತ ಲೇಖನ ಸಾಮಥ್ರ್ಯವನ್ನು ಪ್ರಕಟಿಸಿತು.

ಜಾರ್ಜ್‍ಟೆಕ್ನೊರನ ಸಲಹೆ ಹಾಗೂ ಲೇಖಕ ವಾಷಿಂಗ್‍ಟನ್ ಇರ್ವಿಂಗ್‍ನ ಪ್ರೋತ್ಸಾಹಗಳಿಂದಾಗಿ ಈತ ತನ್ನ ಉಳಿದ ಬದುಕನ್ನು ಸ್ಪೇನ್‍ನ ಇತಿಹಾಸದ ಆಧ್ಯಯನಕ್ಕೆ ಮೀಸಲಿಟ್ಟ. ಈತನ ಹಿಸ್ಟರಿ ಆಫ್ ದಿ ರೆಯ್ನ್ ಆಫ್ ಫರ್ಡಿನೆಂಡ್ ಅಂಡ್ ಇಸಬೆಲಾ ದಿ ಕೆಥೋಲಿಕ್ (ಮೂರು ಸಂಪುಟಗಳು 1838) ಎಂಬ ಕೃತಿ ಸುಮಾರು ಒಂದು ದಶಕದ ಪರಿಶ್ರಮದ ಫಲ. ಇದು ಬಾಸ್ಪನ್ನಿನ ಸಾಹಿತ್ಯಿಕ ಜಗತ್ತನ್ನು ಚಕಿತಗೊಳಿಸಿತು. 16ನೆಯ ಶತಮಾನದ ಸ್ಪೇನ್ ಮತ್ತು ಅದರ ವಸಾಹತುಗಳನ್ನು ಕುರಿತ ಒಬ್ಬ ಇತಿಹಾಸಕಾರನಾಗಿ ಇವನಿಗೆ ಹೆಸರು ಬಂತು.
ಈತನ ಇನ್ನೊಂದು ಕೃತಿ ಹಿಸ್ಟರಿ ಆಫ್ ದಿ ಸೆಕೆಂಡ್ ಕಿಂಗ್ ಆಫ್ ಸ್ಪೇನ್ (ಮೂರು ಸಂಪುಟಗಳು, 1855-58) ಸ್ಪೇನಿನ ಮಿಲಿಟರಿ ಅಂತರರಾಷ್ಟ್ರೀಯ ವ್ಯವಹಾರ ಹಾಗೂ ರಾಜಕೀಯ ಇತಿಹಾಸಗಳನ್ನು ಸಾಧಾರಣವಾಗಿ ತುಂಬ ರೋಚಕವಾಗಿ ತಿಳಿಸುತ್ತದೆ. ಈತನ ಜನಪ್ರಿಯತೆಗೆ ಕಾರಣವಾದ ಕೃತಿಗಳು ಎರಡು. ಒಂದು ಹಿಸ್ಟರಿ ಆಫ್ ದಿ ಕಾಂಕ್ವೆಸ್ಟ್ ಆಫ್ ಮೆಕ್ಸಿಕೊ (ಮೂರು ಸಂಪುಟಗಳು 1843). ಈ ಕೃತಿ ಹತ್ತು ಭಾಷೆಗಳಲ್ಲಿ ಇನ್ನೂರಕ್ಕೂ ಹೆಚ್ಚು ಸಲ ಪ್ರಕಟವಾಗಿದೆ. ಎರಡನೆಯದು ಹಿಸ್ಟರಿ ಆಫ್ ದಿ ಕಾಂಕ್ವೆಸ್ಟ್ ಆಫ್ ಪೆರು ಎರಡು ಸಂಪುಟಗಳು 1847). ಇದು ಹನ್ನೊಂದು ಭಾಷೆಗಳಲ್ಲಿ 160 ಸಲ ಪ್ರಕಟವಾಗಿದ್ದು ಈ ಕೃತಿಗಳ ಜನಪ್ರಿಯತೆಯ ಅರಿವಾಗುವುದು.

ಸ್ಪೇನಿನ ಇತಿಹಾಸಕ್ಕೆ ಸಂಬಂಧಿಸಿದ ಹಲವಾರು ಹಸ್ತಪ್ರತಿಗಳು ಮತ್ತು ಸುಮಾರು 5000 ಅಮೂಲ್ಯ ಗ್ರಂಥಗಳ ಭಂಡಾರ ಈತನಲ್ಲಿತ್ತು. ಎಲ್ಲ ಸಾಕ್ಸ್ಯಾಧಾರಗಳನ್ನೂ ಪರಿಶೀಲಿಸಿ ರಚಿಸಿದ ಈತನ ಇತಿಹಾಸ ಗ್ರಂಥಗಳು ವಿದ್ವಾಂಸರಿಗೂ ಸಾಮಾನ್ಯ ಓದುಗರಿಗೂ ಪ್ರಿಯವಾದವು. ಆದರೆ ಇತಿಹಾಸಕ್ಕೆ ಸಂಬಂಧಿಸಿದ ಸ್ಥಳಗಳನ್ನು ನೋಡದೆ, ಪುರಾತತ್ತ್ವ ಅವಶೇಷಗಳನ್ನು ಗಮನಿಸದೆ ಬರೆದದ್ದು ಈತನ ಕೃತಿಗಳ ಪ್ರಮುಖ ದೋಷವೆನ್ನಲಾಗಿದೆ. ಹಾಗಿದ್ದರೂ ಸ್ಪೇನಿನ ಇತಿವೃತ್ತಗಳನ್ನು ಆಧರಿಸಿದ ಈತನ ಇತಿಹಾಸನಿರೂಪಣೆ ಸಾಕಷ್ಟು ಸರಿಯಾಗಿದೆ ಎಂದು ಆಧುನಿಕ ವಿದ್ವಾಂಸರ ನಿರ್ಧಾರ.

ಇತಿಹಾಸದಿಂದ ಜನರಿಗೆ ಅರಿವುಂಟುಮಾಡುವುದು ಹಾಗೂ ರಂಜನೆ ನೀಡುವುದು ಈತನ ಧ್ಯೇಯವಾಗಿತ್ತು. ಈತನ ಇತಿಹಾಸಕೃತಿಗಳು ದಾರ್ಶನಿಕ ಅಥವಾ ವಿಶೇಷಣಾತ್ಮಕವಾಗಿರುವುದಕ್ಕಿಂತ ಹೆಚ್ಚಾಗಿ ನಿರೂಪಣಾ ಪ್ರಧಾನವೂ ವಿವರಣಾತ್ಮಕವೂ ಆಗಿವೆ. ಈತನ ವರ್ಣರಂಜಿತ ಗದ್ಯಶೈಲಿ, ಯುದ್ಧವಿಜಯ, ಅಂತರರಾಷ್ಟ್ರೀಯ ಸಂಬಂಧ ಹಾಗೂ ರಾಜಕೀಯ ಸ್ಥಿತಿಗತಿಗಳನ್ನು ಕುರಿತದ್ದಾಗಿದೆಯೇ ವಿನಾ ಸಾಂಸ್ಕøತಿಕ, ಸಾಮಾಜಿಕ ಅಥವಾ ಆರ್ಥಿಕ ವಿಷಯಗಳನ್ನು ಕುರಿತದ್ದಾಗಿಲ್ಲ. ನಾಟಕೀಯ ಬಂಧ ಈತನ ಕೃತಿಗಳ ಇನ್ನೊಂದು ಪ್ರಮುಖಾಂಶ. ಇತಿಹಾಸಕಾರನಾಗಿ ಲೇಖಕನಾಗಿ ಈತನ ಸಾಧನೆ ಮತ್ತು ಈತ ಗಳಿಸಿದ ಜನಪ್ರಿಯತೆ ಗಮನಾರ್ಹ. ಮಹಾ ಇತಿಹಾಸ ಸಾಹಿತ್ಯವೂ ಆಗಬಲ್ಲುದು ಎಂದು ತೋರಿಸಿ ಕೊಟ್ಟವನು ಪ್ರೆಸ್‍ಕಾಟ್.

	1859ರ ಜನವರಿ 28ರಂದು ಈತ ಮೃತಿಹೊಂದಿದ. ಈತನ ಸಮಗ್ರ ಕೃತಿಗಳ 22 ಸಂಪುಟಗಳಲ್ಲಿ (1904) ಪ್ರಕಟವಾಗಿವೆ.
 (ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ